ನಮ್ಮ ನಾಡು ನಮ್ಮ ಹೆಮ್ಮೆ - ಕನ್ನಡ ಬಾವುಟ

ಕನ್ನಡ ಅಂತ ಪದ ಕೇಳಿದರೆ ಸಾಕು , ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವುದು ಕೆಂಪು ಮತ್ತು ಹಳದಿ ಬಣ್ಣದ ಕನ್ನಡದ ಬಾವುಟ, ಬಾವುಟವು ಆ ಪ್ರದೇಶದ ಜನರನ್ನು ಮತ್ತು ಅವರ ಭಾವನೆಗಳನ್ನು ಒಂದು ಮಾಡುವ ಅಭಿಮಾನದ ಸಂಕೇತ. ಕನ್ನಡದ ಬಾವುಟವು ಕನ್ನಡಿಗರ ಅಭಿಮಾನದ ಸಂಕೇತ. ಕನ್ನಡ ಬಾವುಟ ಹೇಗೆ ಜನ್ಮ ತಾಳಿತು ಅದರ ಕರ್ತೃ ಯಾರು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅನ್ಯಾಯ , ಅಕ್ರಮ, ಮೋಸ ವಂಚನೆಗಳು ಹೆಚ್ಚಾಗದ ಜನರು ಸಿಡಿದೆಳುವುದು ಸಹಜ ಆರಂಭ ನಿಧಾನವಾಗಿದ್ದರು ಕಡೆಗೆ ಚುರುಕುಗೊಂಡು  ಮುಂದೆ  ಅದೊಂದು ದೊಡ್ಡ ಕ್ರಾಂತಿಗೆ ನಾಂದಿಮಾಡುತ್ತದೆ.  ನಮ್ಮ ಕನ್ನಡ ಬಾವುಟದ ವಿಚಾರದಲ್ಲಿಯೂ ಹಾಗೆ. ಕನ್ನಡಿಗರಿಗೆ ಆಗಾಗ ತೊಂದರೆ ಕೊಡುವುದರಲ್ಲಿ ತಮಿಳರು ಯಾವಾಗಲೂ ಅಗ್ರಜರೆಂದು ನೀವು ತಿಳಿದಿದ್ದೀರಿ.   ತಮಿಳು ನಾಡಿನ ಪ್ರಾದೇಶಿಕ ಪಕ್ಷವಾದ ಡಿಎಂಕೆ ಪಕ್ಷದ ಬಾವುಟವನ್ನು ಬೆಂಗಳೂರಿನಲ್ಲಿ  ತಮಿಳರು ಹೆಚ್ಚಾಗಿ ನೆಲೆಸಿರುವ ದಂಡು (ಕಂಟನ್ಮೆಂಟ್) ಪ್ರದೇಶದಲ್ಲಿ ತಮ್ಮ ಮನೆಗಳ ಮೇಲೆ ಹಾರಿಸಿಕೊಂಡಿದ್ದರು. ಇದರಿಂದ ಕನ್ನಡದ ಹೋರಾಟಗಾರರ ಕಣ್ಣುಗಳು ಕೆಂಪಾದವು , ಕನ್ನಡದ ಹೋರಾಟಗಾರರಾದ ಎಂ ರಾಮಮೂರ್ತಿಗಳ ನೇತೃತ್ವದಲ್ಲಿ  ತೀವ್ರ ಹೋರಾಟ ನಡೆಸಿ ಬಾವುಟ ಕೆಳಗಿಳಿಸಿದರು. ಕಡೆಗೆ ಕನ್ನಡಕ್ಕೊಂದು ಬಾವುಟ ಅವಶ್ಯಕತೆಯನ್ನು ಮನಗೊಂಡ ರಾಮಮೂರ್ತಿಗಳು ಹಳದಿ ಹಾಗೂ ಕೆಂಪು  ಬಣ್ಣ ಬಳಸಿ, ಮಧ್ಯದಲ್ಲಿ ಕರ್ನಾಟಕದ ನಕಾಶೆಯಲ್ಲಿ  ಬೆಳೆಯುತ್ತಿರುವ ಪೈರಿನ ಚಿತ್ರಣವಿತ್ತು. ಇದು ಕರ್ನಾಟಕಕ್ಕೆ ಸೇರಬೇಕಾದ ಗಡಿಭಾಗಗಳನ್ನು ಪ್ರತಿನಿಧಿಸುತ್ತಿರುವ ಬಾವುಟವನ್ನು ಸಿದ್ದಪಡಿಸಿದರು. ಮೂಲತಃ ಹಳದಿ ಬಣ್ಣವು ಕನ್ನಡಾಂಬೇಯ ಆರಿಶಿನ ಮತ್ತು ಕುಂಕುಮವನ್ನು ಸೂಚಿಸುತ್ತದೆ ಹಾಗೂ  ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ನೀಡುತ್ತದೆ .

ಮೈಸೂರು ರಾಜ್ಯವು ಉದಯವಾದಗ ಕನ್ನಡಿಗರ ಸ್ಥಿತಿ ಹೀನಾಯವಾಗಿತ್ತು, ರಾಜ್ಯದ ರಾಜಧಾನಿಯಲ್ಲಂತು ಕೇಳುವ ಹಾಗೆಯೇ ಇಲ್ಲ ,ಅನ್ಯಭಾಷಿಗರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು ಸಲುವಾಗಿ ರಾಮಮೂರ್ತಿಗಳು , ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಜೊತೆಗೂಡಿ  ಕನ್ನಡಿಗರನ್ನು ಎಚ್ಚರಿಸಲು ಕನ್ನಡ ಚಳುವಳಿಗಳನ್ನು ಆರಂಭಿಸಿದರು. ಎಂ  ರಾಮಮೂರ್ತಿಗಳು  ಕನ್ನಡ ಪರವಾಗಿ ಚಳವಳಿ ಹಾಗೂ ಕ್ರಾಂತಿಗಳನ್ನು ಮಾಡಿದವರು. ಬೆಂಗಳೂರಿನಲ್ಲಿ ಅನ್ಯ ಭಾಷೆ ಹಾವಳಿ ವ್ಯಾಪಕವಾದಾಗ ಅದರ ವಿರುದ್ಧ ಸಿಡಿದು ನಿಂತವರು. ಆಡಳಿತದಲ್ಲಿ ಕನ್ನಡ ಭಾಷೆ ಜಾರಿ, ನದಿ ನೀರು, ಕನ್ನಡಿಗರಿಗೆ ಉದ್ಯೋದಲ್ಲಿ ಮೀಸಲು ಸೇರಿದಂತೆ ನಾಡು ನುಡಿಗಾಗಿ ಹೋರಾಟ ನಡೆಸಿದರು. ರಾಮಮೂರ್ತಿಗಳ ನೇತೃತ್ವದಲ್ಲಿ ಕನ್ನಡ ಚಳವಳಿಗಳು  ಶಿಸ್ತುಬದ್ಧವಾಗಿದ್ದವು . ಹೋರಾಟಕ್ಕೆ ಹಣ ಮುಖ್ಯವಾಗಿರಲಿಲ್ಲ , ಉತ್ತಮ ಧ್ಯೇಯ ಹೊಂದಿದ್ದವು. ಆದರೆ ಇಂದಿನ ಕನ್ನಡ ಚಳುವಳಿಗಳು ಚಳುವಳಿಗಾಗರ ಇಚ್ಛಾಶಕ್ತಿಯ ಕೊರತೆಯೆಯಿಂದ ಅರ್ಥ ಕಳೆದುಕೊಳ್ಳುತ್ತಿವೆ.

ಅನ್ಯ ಭಾಷಿಕರ ಎದುರು ಕನ್ನಡಿಗರು ತಲೆ ಎತ್ತಿ ನಿಲ್ಲುವಂತೆ ಮಾಡಿದ ಈ ಮಹನೀಯರನ್ನು ಸ್ಮರಿಸೋಣವೇ.

Comments